Wednesday, May 31, 2006

ಸ್ಮರಣೆ - smarane

ಸ್ಮರಣೆ ಮಾತ್ರದಿ ಬಾಳ ಶಿಖರಕೆ ದಾರಿದೀಪವದಾಗುವ
ನೆನಪಿನಾಗರದಿಣುಕು ನೋಟವ ಮೆಲುಕು ಹಾಕುತ ನಲಿಯುವ ||

ಶೈಶವದ ಮುಗ್ಧತೆಯ ಮಡಿಲಲಿ ಉಣಲು ಮಾಡಿದೆ ರಗಳೆಯ
ಸಹನೆಯಿಂದಲಿ ಚಂದಮಾಮನ ತೋರುತಲಿ ನನಗುಣಿಸುತ
ಅಮ್ಮನಾ ಅಕ್ಕರೆಯ ಹಾಡುಗಳಿಂದು ಕಿವಿ ಗುಯ್ ಗುಟ್ಟುತಾ
ಸ್ಮರಣೆ ಮಾತ್ರದಿ ಮುಗ್ಧನಾಗುವೆ ಪ್ರೀತಿ ಕಡಲಲಿ ಈಜುತ || ೧ ||

ಪುಟ್ಟ ಬಾಲಕನಾಗಿ ಬೀದಿಯ ಮಕ್ಕಳೊಂದಿಗೆ ಆಡುತ
ಆಟದಲಿ ಅಪಜಯವ ಕಂಡರೂ ಮಮತೆಯಿಂ ತಲೆ ಸವರುತ
ಮಾತೃ ಸ್ಪರ್ಶದ ಮಾತ್ರದಿಂದಲಿ ಸೋಲನೆಲ್ಲವ ಮರೆಯುತ
ಸ್ಮರಣೆ ಮಾತ್ರದಿ ನಲಿದು ಪುಟಿಯುವೆ ಸ್ಫೂರ್ತಿಯಿಂದಲಿ ಕುಣಿಯುತ || ೨ ||

ಚಿಗುರು ಮೀಸೆಯ ತರುಣನಾಗಲು ಮನವದಾಯಿದು ಚಂಚಲ
ಅಮ್ಮ ಜಾಗೃತಳಾಗಿ ನನ್ನಯ ಮನದ ಹುಳುಕನು ತೋರುತ
ಕಠೋರ ಮಾತುಗಳಿಂದ ತಿದ್ದುತ ನೊಂದುಕೊಂಡಳು ಮನದಲಿ
ಸ್ಮರಣೆ ಮಾತ್ರದಿ ಸೂಕ್ತ ಮಾರ್ಗದಿ ಬಾಳ ಪಯಣವ ಬೆಳೆಸುತ || ೩ ||

ಅಮ್ಮ ನಿನ್ನಯ ಬಾಳ ಕ್ಷಣ ಕ್ಷಣ ಸುರಿದೆ ನನ್ನಯ ಏಳ್ಗೆಗೆ
ಅನಂತ ಋಣವದನಂತ ಪ್ರೀತಿಯದೆಂತು ನಾ ಅದ ಭರಿಸಲಿ
ಇನಿತು ಸಾಧನೆಯಾದರೂ ಅದು ನಿನ್ನ ಚರಣ ಸಮರ್ಪಿತ
ಸ್ಮರಣೆ ಮಾತ್ರದಿ ಬಾಳ ಕಣ ಕಣ ಸಾರ್ಥಕತೆಯಿಂ ನಲಿಯುತ || ೪ ||

- ಕಾರ್ತಿಕ್.ಸಿ.ಎಸ್

1 comment:

Sujay said...

its really very nice....
www.sujayshetty.com